Thursday, November 13, 2008

ಬಯಲಿಗಿಳಿಯುವ ಮುನ್ನ...

ಅದಾಗ ತಾನೇ ಹುಟ್ಟಿದ ಮಗುವೊಂದು ಕಣ್ತೆರೆದ ಮೊದಲ ಕ್ಷಣದಲ್ಲಿ ವಿಸ್ಮಯದಿಂದ ಸುತ್ತೆಲ್ಲಾ ದಿಟ್ಟಿಸುತ್ತದಲ್ಲಾ? ಅಂತಹುದೇ ಸ್ಥಿತಿ ಮೊದಲ ಬಾರಿ ಕಂಪ್ಯೂಟರಿನ ಕೀಬೋರ್ಡ್‌ಗೆ ಕೈಯಿಟ್ಟಾಗ ನನ್ನನ್ನಾವರಿಸಿತು. ನನ್ನ ಪಾಲಿಗದು ಹೊಸ ಜಗತ್ತು. ಗೆಳೆಯರಾದ ಚಂದ್ರಶೇಖರ ಗಜನಿ ಹಾಗೂ ಹರೀಶರ ನೆರವು ಪಡೆದುಕೊಂಡು ಈ ಲೋಕಕ್ಕೆ ಅಡಿಯಿರಿಸಿದ್ದೇನೆ.
ಬೇರೆ-ಬೇರೆ ಬ್ಲಾಗ್ ನೋಡಿದಾಗೆಲ್ಲಾ ನಾನೂ ಮಾಡ್ಬೇಕು ಅಂತ ನನಗೆ ನಾನೇ ಹೇಳಿಕೊಳ್ಳುತ್ತಿದ್ದೆ. ಅದು ಪಕ್ಕದಲ್ಲಿ ಕುಂತ ಗೆಳೆಯ ಗುರುವಿಗೆ ಕೇಳಿಸಿ ಗದರಿಸಿಕೊಂಡು ಇದೀಗ ಬೆಳದಿಂಗಳ ಬಯಲಲ್ಲಿ ಕುಂತು ಅಕ್ಷರಗಳ ಮೂಲಕ ಕನಸು ಹೊಸೆಯ ಹೊರಟಿದ್ದೇನೆ. ಮೂಲತಃ ಪತ್ರಕರ್ತನಾದ ನಾನು ಆ ಕ್ಷಣದ ಘಟನಾವಳಿಗಳನ್ನು ಯಾವ ಇಸಂಗಳಿಗೂ ಒಳಗಾಗದೆ ಸ್ವಸ್ಥ ಮನಸ್ಸಿನಿಂದ ಗ್ರಹಿಸಿದಾಗ ದಕ್ಕುವುದೇ ಅಂತಿಮ ಸತ್ಯವೆಂದು ಬಲವಾಗಿ ನಂಬಿದ್ದೇನೆ.
ಅಲ್ಲೆಲ್ಲೋ ಮಲೆನಾಡ ಮೂಲೆಯಲ್ಲಿ ಗಾರೆ ಕಲೆಸುತ್ತಾ, ಕಾಫಿಪುಡಿಯ ಅಂಗಡಿಯಲ್ಲಿ ಪ್ಯಾಕೆಟ್ಟು ಕಟ್ಟುತ್ತಾ, ಲಾಡ್ಜಿನಲ್ಲಿ ಕಸಗುಡಿಸುತ್ತಾ, ಯಾರೋ ಮಲಗೆದ್ದ ಹಾಸಿಗೆಯ ಸುಕ್ಕುಗಳನ್ನು ಸರಿಪಡಿಸುತ್ತಾ ಸಾಕಿಕೊಂಡ ಕನಸು ಹಾಗೂ ಆ ಘಳಿಗೆಯಲ್ಲಿ ಮೂರ್ತರೂಪ ಪಡೆದ ಭಾವನೆಗಳು, ಸತ್ತ ಪ್ರೀತಿ, ಕುಸಿದು ಬಿದ್ದ ಕನಸುಗಳೇ ಬರೆಯಲು ಹಚ್ಚಿವೆ.
ಇನ್ನು ಮುಂದೆ ಬಯಲ ಬೀದಿಗುಂಟ ನಡಿಗೆ ನಿರಂತರ. ವಾಸ್ತವಕ್ಕೆ ಪೂರ್ವಗ್ರಹವಿಲ್ಲದೆ ಸ್ಪಂದಿಸುತ್ತಾ, ಕನಸುಕಾಣುತ್ತಾ, ನೆನಪುಗಳನ್ನು ಕೆದಕುತ್ತಾ ಮತ್ತು ಅವುಗಳಿಂದಲೇ ಒಂದಷ್ಟು ಜೀವಗಳಿಗೆ ಸ್ಫೂರ್ತಿ ನೀಡಲು ಪ್ರಯತ್ನಿಸುತ್ತಾ...