Thursday, November 13, 2008

ಬಯಲಿಗಿಳಿಯುವ ಮುನ್ನ...

ಅದಾಗ ತಾನೇ ಹುಟ್ಟಿದ ಮಗುವೊಂದು ಕಣ್ತೆರೆದ ಮೊದಲ ಕ್ಷಣದಲ್ಲಿ ವಿಸ್ಮಯದಿಂದ ಸುತ್ತೆಲ್ಲಾ ದಿಟ್ಟಿಸುತ್ತದಲ್ಲಾ? ಅಂತಹುದೇ ಸ್ಥಿತಿ ಮೊದಲ ಬಾರಿ ಕಂಪ್ಯೂಟರಿನ ಕೀಬೋರ್ಡ್‌ಗೆ ಕೈಯಿಟ್ಟಾಗ ನನ್ನನ್ನಾವರಿಸಿತು. ನನ್ನ ಪಾಲಿಗದು ಹೊಸ ಜಗತ್ತು. ಗೆಳೆಯರಾದ ಚಂದ್ರಶೇಖರ ಗಜನಿ ಹಾಗೂ ಹರೀಶರ ನೆರವು ಪಡೆದುಕೊಂಡು ಈ ಲೋಕಕ್ಕೆ ಅಡಿಯಿರಿಸಿದ್ದೇನೆ.
ಬೇರೆ-ಬೇರೆ ಬ್ಲಾಗ್ ನೋಡಿದಾಗೆಲ್ಲಾ ನಾನೂ ಮಾಡ್ಬೇಕು ಅಂತ ನನಗೆ ನಾನೇ ಹೇಳಿಕೊಳ್ಳುತ್ತಿದ್ದೆ. ಅದು ಪಕ್ಕದಲ್ಲಿ ಕುಂತ ಗೆಳೆಯ ಗುರುವಿಗೆ ಕೇಳಿಸಿ ಗದರಿಸಿಕೊಂಡು ಇದೀಗ ಬೆಳದಿಂಗಳ ಬಯಲಲ್ಲಿ ಕುಂತು ಅಕ್ಷರಗಳ ಮೂಲಕ ಕನಸು ಹೊಸೆಯ ಹೊರಟಿದ್ದೇನೆ. ಮೂಲತಃ ಪತ್ರಕರ್ತನಾದ ನಾನು ಆ ಕ್ಷಣದ ಘಟನಾವಳಿಗಳನ್ನು ಯಾವ ಇಸಂಗಳಿಗೂ ಒಳಗಾಗದೆ ಸ್ವಸ್ಥ ಮನಸ್ಸಿನಿಂದ ಗ್ರಹಿಸಿದಾಗ ದಕ್ಕುವುದೇ ಅಂತಿಮ ಸತ್ಯವೆಂದು ಬಲವಾಗಿ ನಂಬಿದ್ದೇನೆ.
ಅಲ್ಲೆಲ್ಲೋ ಮಲೆನಾಡ ಮೂಲೆಯಲ್ಲಿ ಗಾರೆ ಕಲೆಸುತ್ತಾ, ಕಾಫಿಪುಡಿಯ ಅಂಗಡಿಯಲ್ಲಿ ಪ್ಯಾಕೆಟ್ಟು ಕಟ್ಟುತ್ತಾ, ಲಾಡ್ಜಿನಲ್ಲಿ ಕಸಗುಡಿಸುತ್ತಾ, ಯಾರೋ ಮಲಗೆದ್ದ ಹಾಸಿಗೆಯ ಸುಕ್ಕುಗಳನ್ನು ಸರಿಪಡಿಸುತ್ತಾ ಸಾಕಿಕೊಂಡ ಕನಸು ಹಾಗೂ ಆ ಘಳಿಗೆಯಲ್ಲಿ ಮೂರ್ತರೂಪ ಪಡೆದ ಭಾವನೆಗಳು, ಸತ್ತ ಪ್ರೀತಿ, ಕುಸಿದು ಬಿದ್ದ ಕನಸುಗಳೇ ಬರೆಯಲು ಹಚ್ಚಿವೆ.
ಇನ್ನು ಮುಂದೆ ಬಯಲ ಬೀದಿಗುಂಟ ನಡಿಗೆ ನಿರಂತರ. ವಾಸ್ತವಕ್ಕೆ ಪೂರ್ವಗ್ರಹವಿಲ್ಲದೆ ಸ್ಪಂದಿಸುತ್ತಾ, ಕನಸುಕಾಣುತ್ತಾ, ನೆನಪುಗಳನ್ನು ಕೆದಕುತ್ತಾ ಮತ್ತು ಅವುಗಳಿಂದಲೇ ಒಂದಷ್ಟು ಜೀವಗಳಿಗೆ ಸ್ಫೂರ್ತಿ ನೀಡಲು ಪ್ರಯತ್ನಿಸುತ್ತಾ...

Thursday, October 23, 2008

ಭೈರಪ್ಪನವರ ಕೊಳಕು ಚಿಂತನೆ !

ಪ್ರತೀ ಧರ್ಮಗಳೂ ಅಪನಂಬಿಕೆಗಳ ತಳಹದಿಯ ಮೇಲೆ ಅಸ್ಥಿತ್ವ ಸ್ಥಾಪಿಸಿಕೊಳ್ಳಲು ಹವಣಿಸುತ್ತಿರುವ ಇಂದಿನ ದಿನಮಾನದ ತುರ್ತು ಯಾವುದು? ಎಂದೋ ಘಟಿಸಿ ಇತಿಹಾಸದ ಗರ್ಭ ಸೇರಿದ ವಿಷಯಗಳನ್ನು ಕೆದಕಿ, ಅವುಗಳನ್ನು ವಾಸ್ತವದ ಜೊತೆ ಸಮೀಕರಿಸಿ ಉರಿವ ಬೆಂಕಿಗೆ ತುಪ್ಪ ಸುರಿಯುವುದಾ? ಅಥವಾ ಪ್ರಸ್ತುತತೆಯನ್ನು ವಿವಿಧ ಕೋನಗಳಿಂದ ಗ್ರಹಿಸಿ ಆದ ಗಾಯಗಳಿಗೆ ಔಷಧಿ ಹಾಕುವ ಮಾನವೀಯ ಚಟುವಟಿಕೆಗಳಾ? ಇಂತಹುದೊಂದು ಜ್ವಲಂತ ಪ್ರಶ್ನೆಯನ್ನು ಹುಟ್ಟು ಹಾಕಿದ್ದು ಎಸ್.ಎಲ್.ಭೈರಪ್ಪನವರ ಲೇಖನ.
ಜನಪ್ರಿಯ ಕಾದಂಬರಿಕಾರ ಭೈರಪ್ಪನವರು ಕನ್ನಡದ ನಂ.ಒನ್ ದಿನಪತ್ರಿಕೆಯೊಂದರಲ್ಲಿ ಪುಟಗಟ್ಟಲೆ ವಿಷ ಉಗುಳಿ ನಿರಾಳರಾಗಿದ್ದಾರೆ. ಕೆಲ ತಿಂಗಳುಗಳ ಹಿಂದೆ ‘ಆವರಣ’ ಅಂತೊಂದು ಕಾದಂಬರಿ ಬರೆದು ತಮ್ಮ ಅಂತರಂಗವನ್ನು ಅನಾವರಣಗೊಳಿಸಿ ಸುದ್ದಿಯಾಗಿದ್ದ ಭೈರಪ್ಪ ಇದೀಗ ಮತಾಂತರದ ಕುರಿತು ಮೂಗಿನ ನೇರಕ್ಕೆ ಬರೆದು ಅವರೊಳಗಿನ ನೈಜ ವಿಚಾರಗಳನ್ನು, ಅವರ ಚಿಂತನೆಯ ತಳಹದಿಯನ್ನು ತೆರೆದುಕೊಂಡಿದ್ದಾರೆ. ಅವರ ಬರಹವನ್ನು ಸ್ವಸ್ಥ ಮನಸ್ಸಿನಿಂದ ಓದಿದ ಪ್ರತಿಯೊಬ್ಬರಿಗೂ ಮೊನ್ನೆ ಮತಾಂತರದ ನೆಪ ಮುಂದಿಟ್ಟುಕೊಂಡು ಚರ್ಚುಗಳಿಗೆ ನುಗ್ಗಿದ ಭಜರಂಗಿಗಳ ವಕ್ತಾರನಂತೆ, ಬೆಂಬಲಿಗನಂತೆ ಕಂಡಿದ್ದಾರೇ ಹೊರತು, ಅವರೊಬ್ಬ ಪ್ರಾಜ್ಞ ಚಿಂತಕನಂತೆ ಯಾರಿಗೂ ಕಂಡಿಲ್ಲ.
ಲೇಖನದುದ್ದಕ್ಕೆ ಹಿಂದೂ ಧರ್ಮದೊಳಗಿನ ಸಕಲ ಹುಳುಕುಗಳಿಗೂ ಅಕ್ಷರ ಸಮಾಧಿ ಕಟ್ಟುತ್ತಾ, ಒಂದಿಡೀ ಕ್ರೈಸ್ತ ಧರ್ಮದ ವಿರುದ್ಧ ಹೊಗೆಯುಗುಳುತ್ತಾ ಸಾಗಿರುವ ಭೈರಪ್ಪನವರು ಇತಿಹಾಸದ ಗರ್ಭ ಸೇರಿದ ಕೊಳಕು ವಿಚಾರಗಳನ್ನೆಲ್ಲಾ ಕೆದಕುತ್ತಾ, ಅವುಗಳಿಗೆ ಪರಂಗಿ ಪುಸ್ತಕಗಳ ಉಲ್ಲೇಖಗಳನ್ನು ಸಮರ್ಥಯಾಗಿ ಉಲ್ಲೇಖಿಸುತ್ತಾ ಪಾಂಡಿತ್ಯ ಪ್ರದರ್ಶಿಸುವ ಭರದಲ್ಲಿ ಕಟುವಾಸ್ತವತೆಯತ್ತ ಅಕ್ಷರಶಃ ಕುರುಡುತನ ಮೆರೆದಿದ್ದಾರೆ. ಇತಿಹಾಸ ಹಾಗೂ ವಿದೇಶಗಳ ವಿದ್ಯಮಾನಗಳನ್ನು ಮುಂದಿಟ್ಟು ಇಂದು ನಮ್ಮನೆಲದಲ್ಲಿ ನಡೆಯುತ್ತಿರುವ ಘಟನಾವಳಿಗಳಲ್ಲಿ ಒಂದು ಗುಂಪನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ಕ್ರಿಶ್ಚಿಯನ್ ಮಿಷನರಿಗಳು ಹಿಂದೂಗಳನ್ನು ಹೇಗೆಲ್ಲಾ ಮೋಸದಿಂದ ಮತಾಂತರ ಮಾಡುತ್ತಿದ್ದಾರೆಂದು ತಿಳಿಸುವ ಧಾವಂತದಲ್ಲಿ ಭೈರಪ್ಪನವರು ಹಿಂದೂಗಳೇಕೆ ಬೇರೆ ಧರ್ಮಗಳತ್ತ ಮುಖಮಾಡುತ್ತಿದ್ದಾರೆಂಬ ಸತ್ಯದ ಬಗ್ಗೆ ಅಪ್ಪಿ ತಪ್ಪಿಯೂ ಎರಡಕ್ಷರ ಬರೆದಿಲ್ಲ. ಹಾಗಂತ ಕ್ರಿಶ್ಚಿಯನ್ ಧರ್ಮ ಶ್ರೇಷ್ಠವೆಂದು ವಾದಿಸುವ ಅಗತ್ಯ ನಮಗಿಲ್ಲ. ಯಾಕೆಂದರೆ ಅದು ಅಂತಹುದೊಂದು ಮೆಚ್ಚುಗೆಗೆ ಅರ್ಹವಾದದ್ದೂ ಅಲ್ಲ. ಏಸುವಿನ ಚಿಂತನೆಗಳು ಉದಾತ್ತವಾದದ್ದೇ ಆದರೂ ತದನಂತರ ಬಂದ ಮಂದಿ ಅದನ್ನು ವಿರುದ್ಧ ದಿಕ್ಕಿನಲ್ಲೇ ಕೊಂಡೊಯ್ದರು. ಇದು ವಿದೇಶಗಳ ವಿದ್ಯಮಾನಗಳ ಬಗ್ಗೆ ಚರ್ಚಿಸಲು ಸಮಯವಲ್ಲ. ಇದು ನಮ್ಮ ನೆಲದ ಸಮಸ್ಯೆಗಳತ್ತ ದೃಷ್ಟಿಯ ಹರಿಸಲು ಪರ್ವಕಾಲ!
ಮೊನ್ನೆ ಮತಾಂತರ ವಿಚಾರ ಉಲ್ಬಣಗೊಂಡ ದಿನದಿಂದಲೂ ವಿವಿಧ ಸ್ತರಗಳಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಒಂದು ಥರದ ವಿಚಾರಧಾರೆಯ ಮಂದಿ ಮತಾಂತರ ತಪ್ಪು ಅಂತ ಮೊಂಡು ವಾದ ಮಂಡಿಸುತ್ತಿದ್ದರೆ ಇನ್ನೊಂದು ವಿಚಾರಗಳವರು ಅದು ತಪ್ಪಲ್ಲ ಎಂದು ವಾದಿಸುತ್ತಿದ್ದಾರೆ. ಅದೆಲ್ಲದರ ಹಿಂದೆ ಒಂದಿಡೀ ಸರ್ಕಾರವೇ ಪುಂಡ ಭಜರಂಗಿಗಳ ಬೆನ್ನಿಗೆ ನಿಂತು ಸಹಾಯ ಹಸ್ತ ಚಾಚುತ್ತಿದೆ. ಇದುವರೆಗೆ ಮತಾಂತರ ಪ್ರಕ್ರಿಯೆಗೆ ಆಗಾಗ ಪಕ್ಕಾಗುತ್ತಾ ಬಂದ ದಲಿತ ಸಮುದಾಯದ ಕೆಲ ಪ್ರಜ್ಞಾವಂತರು ‘ಹಿಂದುಗಳನ್ನು ಮತಾಂತರ ಮಾಡುತ್ತಿದ್ದಾರೆಂದು ಬೊಬ್ಬೆ ಹಾಕುತ್ತಿರುವ ಮಂದಿ ಈ ನೆಲದ ದಲಿತರನ್ನು ಯಾವತ್ತು ಹಿಂದೂಗಳಂತೆ ನಡೆಸಿಕೊಂಡಿದ್ದಾರೆ? ನಿಜವಾಗಿಯೂ ನಾವು ಹಿಂದೂಗಳಾ’? ಅಂತ ಮುಖಕ್ಕೆ ಹೊಡೆದಂತೆ ಪ್ರಶ್ನಿಸುತ್ತಿದ್ದಾರೆ. ಉತ್ತರ ಹೇಳಬೇಕಾದ ಭೈರಪ್ಪರಂತಹವರು ವಿದೇಶದ ವಿದ್ಯಮಾನಗಳತ್ತ ಕಣ್ಣು ನೆಟ್ಟು ಇತಿಹಾಸದ ವ್ರಣ ಬಗೆಯುತ್ತಾ ಬ್ಯುಸಿಯಾಗಿದ್ದಾರೆ.
ಒಂದು ಧರ್ಮದ ಕೆಲವೇ ಕೆಲ ಮಂದಿ ಮಾಡುತ್ತಿರುವ ಅಪದ್ಧ ಕೆಲಸಗಳಿಗೆ ಒಂದಿಡೀ ಸಮುದಾಯವನ್ನೇ ಹೊಣೆ ಮಾಡುವುದು ಅವಿವೇಕತನ. ನಮ್ಮ ಬುಡದಲ್ಲೇ ಹೊಲಸಿಟ್ಟುಕೊಂಡು ಬೇರೆಯವರತ್ತ ನೋಡಿ ಮೂಗುಮುಚ್ಚಿಕೊಳ್ಳುವುದು ಶುದ್ಧ ಢಾಂಬಿಕತನ. ಅಂತಹುದೇ ಒಂದು ಸ್ಥಿತಿಯನ್ನು ಭೈರಪ್ಪನವರು ತಲುಪಿದ್ದಾರೆ. ಈ ಹಿಂದೆ ಹಿಂದೂಗಳ ಆರಾಧ್ಯ ದೈವ ಶ್ರೀರಾಮಚಂದ್ರ ಇದ್ದದ್ದು ಸುಳ್ಳು ಎಂದು ಕೆಲ ಅವಿವೇಕಿಗಳು ಹೇಳಿದಾಗ ಯಾವ ವರ್ಗ ಕನಲಿತ್ತೋ, ಅವರ ವಿಚಾರಧಾರೆಗಳನ್ನೇ ಉಸಿರಾಡುವ ಭೈರಪ್ಪನವರು ಮತಾಂತರದ ಪರಿಧಿಯಲ್ಲಿ ನಿಂತು ಏಸುಕ್ರಿಸ್ತನ ಅಸ್ಥಿತ್ವವನ್ನೇ ಅನುಮಾನಿಸುತ್ತಾರೆ. ಪ್ರವಾದಿಗಳು ತಮ್ಮ ಬಗೆಗೆ ತುಂಬಾ ಹೇಳಿಕೊಳ್ಳುತ್ತಾರೆ. ತಾವು ವಿಶೇಷವಾದ ವ್ಯಕ್ತಿಗಳು, ತಮಗೂ ಸೃಷ್ಟಿಕರ್ತನಿಗೂ ವಿಶೇಷ ಸಂಬಂಧವಿದೆಯೆಂದು ಭಾವಿಸುತ್ತಾರೆ. ಆದರೆ ನಮ್ಮ ಋಷಿ ಮುನಿಗಳ್ಯಾರು ಹಾಗಿಲ್ಲ ಅನ್ನುವ ಅರ್ಥದಲ್ಲಿ ಬರೆಯುವ ಭೈರಪ್ಪನವರಿಗೆ ಸಾಕ್ಷಾತ್ ದೇವರನ್ನೇ ಆವಾಹಿಸಿಕೊಂಡಂತೆ ಕಾವಿ ತೊಟ್ಟು ಪೋಸು ಕೊಡುತ್ತಿರುವ ಸ್ವಾಮೀಜಿಗಳು ಕಾಣಿಸುವುದಿಲ್ಲ. ಕೈಲಾಗದ ಬಡ ಭಕ್ತರನ್ನು ಕಾಲಿಗೆ ಕೆಡವಿಕೊಳ್ಳುತ್ತಾ, ದೇವರೊಂದಿಗೇ ನೇರ ಸಂಭಾಷಣೆಗಿಳಿದಂತೆ ನಟಿಸುತ್ತಾ ಈ ನೆಲದ ಜನರ ಧಾರ್ಮಿಕ ಭಾವನೆಯನ್ನೇ ಬಂಡವಾಳ ಮಾಡಿಕೊಂಡು ಕೊಬ್ಬಿರುವ ಕಾವಿ ವೇಷಧಾರಿಗಳು ಭೈರಪ್ಪನವರ ಕಣ್ಣಿಗೆ ಸಾಚಾಗಳಂತೆ ಕಾಣುತ್ತಾರೆ. ಎಂದೋ ಧರ್ಮಾಂಧರು ನೀಡಿದ ವ್ಯತಿರಿಕ್ತ ಹೇಳಿಕೆಗಳನ್ನೇ ತಮ್ಮ ವಿಚಾರ ವಿಷದ ಹರಿದಾಟಕ್ಕೆ ಸಾಧನವಾಗಿ ಬಳಸಿಕೊಂಡಿರುವ ಭೈರಪ್ಪನವರಿಗೆ ಆಯಾ ಸಮುದಾಯಗಳ ಜನತೆ ಇಂದು ಧರ್ಮವನ್ನು ಮೀರಿ ಬೆಳೆಯಲು’ ಬದುಕಲು ಹವಣಿಸುತ್ತಿದ್ದಾರೆಂಬ ಸೂಕ್ಷ್ಮ ಅರ್ಥವಾಗದಿರುವುದು ದುರಂತ.
ಸಾವಿರ ಸಂಖ್ಯೆಯ ಅನಾಥರನ್ನು, ಕುಷ್ಠ ರೋಗಿಗಳನ್ನು ಮಕ್ಕಳಿಗಿಂತ ಹೆಚ್ಚಾಗಿ ಪೊರೆದ ಮದರ್ ತೆರೇಸಾರ ವ್ಯಕ್ತಿತ್ವದಲ್ಲಿ ತಾಯ್ತನವನ್ನು ಅಕ್ಷರಶಃ ಕೊಂದು ಹಾಕುವ ಭೈರಪ್ಪನವರು ಆಕೆಯನ್ನು ಶುದ್ಧಾನುಶುದ್ಧ ಧರ್ಮ ಪ್ರಚಾರಕಿಯಂತೆ ಬಿಂಬಿಸಲು ಪ್ರಯತ್ನಿಸುತ್ತಾರೆ. ಅದ್ಯಾವುದೋ ಕಾಲದಲ್ಲಿ ಮೂಡಿಗೆರೆಯ ಕಾಫಿತೋಟದೆದುರು ‘ನಾಯಿಗಳಿಗೆ, ಸ್ಥಳೀಯರಿಗೆ ಪ್ರವೇಶವಿಲ್ಲ’ ಎಂಬ ಬೋರ್ಡು ನೇತಾಡುತ್ತಿತ್ತೆಂದು ಹಲುಬುವ ಭೈರಪ್ಪನವರಿಗೆ ಇಂದು ಕ್ರಿಶ್ಚಿಯನ್ನರ ಹಿಡಿತದಲ್ಲಿರುವ ಕಾಫಿ ತೋಟಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಡ ಹಿಂದೂಗಳೇ ದುಡಿಯುತ್ತಿದ್ದಾರೆ, ಅದರಿಂದಲೇ ಬದುಕುತ್ತಿದ್ದಾರೆಂಬುದು ಅರ್ಥವಾಗುವುದಿಲ್ಲ. ವಾಸ್ತವವಾಗಿ ಇಂದು ಕೂಲಿಗಳ ಪಾಲಿಗೆ ಕಾಫಿ ತೋಟಗಳ ಕೆಲಸವೆಂಬುದು ಕಂಫರ್ಟಬಲ್ ಎನಿಸಿದೆ. ಅಕ್ಕಪಕ್ಕದ ಜಮೀನ್ದಾರರು, ಸಾಹುಕಾರರು ಕೊಡುವ ಸಂಬಳಕ್ಕಿಂತ ಅಧಿಕ ಸಂಬಳ, ಬೋನಸ್ ಮುಂತಾದ ವಿಷಯಗಳಲ್ಲಿ ಶ್ರಮಕ್ಕೆ ಸರಿಯಾದ ಪ್ರತಿಫಲ ಸಿಗುತ್ತಿದೆ. ಧರ್ಮದ ಮಸೂರದಿಂದಲೇ ಪ್ರತಿಯೊಂದನ್ನು ನೋಡುವ ಜಾಯಮಾನದವರಿಗೆ ಇದೆಲ್ಲ ಹೇಗೆ ಅರ್ಥವಾಗಬೇಕು?
ಭೈರಪ್ಪನವರು ಧರ್ಮದ ಅಮಲೇರಿಸಿಕೊಂಡು ಸಮಾಜದ ಸ್ವಾಸ್ಥ್ಯಕ್ಕೆ ಕೊಳ್ಳಿಯಿಕ್ಕುತ್ತಿರುವ ಹಿಂದೂ ಪರ ಸಂಘಟನೆಗಳ ಮಂದಿಗೆ ದೇಶಭಕ್ತರ ಸ್ಥಾನ ಕರುಣಿಸಿ, ಈ ನೆಲಸ ಅಸಮಾನತೆ ಹಾಗೂ ತಮ್ಮ ಜನರ ಹೊಟ್ಟೆಯ ಸಂಕಟವನ್ನು ಪರಿಹರಿಸುವ ಉದ್ದೇಶದೊಂದಿಗೇ ಬಂದೂಕೆತ್ತಿಕೊಂಡಿರುವ ನಕ್ಸಲರು ಹಾಗೂ ಭಜರಂಗಿಗಳಂತೆಯೆ ಧರ್ಮವನ್ನು ಉಳಿಸುವ ಏಕೈಕ ಉದ್ದೇಶದಿಂದ ಪ್ರಪಂಚದ ಶಾಂತಿ ಕೆಡಿಸಲು ಶ್ರಮಿಸುತ್ತಿರುವ ಭಯೋತ್ಪಾದಕರುಗಳನ್ನು ಒಂದೇ ತಕ್ಕಡಿಯಲ್ಲಿ ತೂಗಿ ನೋಡುತ್ತಿದ್ದಾರೆ. ಸೂಕ್ಷ್ಮವಾಗಿ ಗಮನಿಸುವ ಸ್ವಸ್ಥ ಮನಸ್ಸುಗಳಿಗೆ ಭಜರಂಗಿಗಳ ಅಜೆಂಡಾಗಳಿಗೂ, ಭಯೋತ್ಪಾದಕರ ಅಜೆಂಡಾಗಳಿಗೂ ಹೆಚ್ಚಿನದೇನೂ ವ್ಯತ್ಯಾಸ ಕಾಣಸಿಗುವುದಿಲ್ಲ. ಹಿಂದುತ್ವದ ಅಮಲಲ್ಲಿ ತೇಲಾಡುವ, ಅದನ್ನೇ ಸಕಲ ಚಿಂತನೆಗಳಿಗೂ ವೇದಿಕೆಯಾಗಿಸಿಕೊಂಡಿರುವ ಭೈರಪ್ಪನವರಿಗೆ ಇದೆಲ್ಲ ಮುಖ್ಯವೆನಿಸುವುದಿಲ್ಲ.
ಭೈರಪ್ಪನವರು ಬರೆದ ಇಡೀ ಲೇಖನವನ್ನು ಮತ್ತೊಮ್ಮೆ ಓದಿ ನೋಡಿ. ಅದರಲ್ಲಿ ಕ್ರಿಶ್ಚಿಯನ್ ಮುಸ್ಲಿಂ ಧರ್ಮಗಳನ್ನೇ ದೂಷಿಸಲಾಗಿದೆಯೇ ಹೊರತು ‘ನಮ್ಮಲ್ಲೂ ತಪ್ಪಿದೆ’ ಎಂಬಂತಹ ಒಂದೇ ಒಂದು ತುಲನಾತ್ಮಕ ವಾಕ್ಯವೂ ಕಾಣಸಿಗುವುದಿಲ್ಲ. ದಲಿತರನ್ನ ಸಾಮಾನ್ಯ ಜನತೆ ಹಿಂದೂಗಳಂತೆ ಭಾವಿಸಿರಬಹುದು. ಆದರೆ ಇಲ್ಲಿನ ಪುರೋಹಿತಶಾಹಿ ವರ್ಗ ಆ ಸಮುದಾಯದವರನ್ನು ಶತಮಾನಗಳಿಂದಲೂ ದನಗಳಿಗಿಂತ ಕೀಳಾಗಿ ನಡೆಸಿಕೊಳ್ಳುತ್ತಾ ಬಂದಿದ್ದಾರೆ. ನಿಜವಾದ ಹಿಂದೂಗಳಿಗೆ ಸಿಗುತ್ತಿರುವ ಸ್ಥಾನಮಾನಗಳು ಇಂದಿಗೂ ಸಿಕ್ಕಿಲ್ಲ.
ಹಾಗೆ ತುಳಿಸಿಕೊಂಡು ಸುಸ್ತಾದ ದಮನಿತರು ಇಲ್ಲಿಂದ ಕಳಚಿಕೊಂಡು ತೊಲಗಲು ಉತ್ಸುಕರಾಗಿದ್ದರು. ಅಂಥವರ ಕಣ್ಣಿಗೆ ಭೈರಪ್ಪನವರಂಥಹವರಿಂದ ವಿಶಿಷ್ಟವೆಂದು ಹೊಗಳಿಸಿಕೊಳ್ಳುವ ಹಿಂದೂಧರ್ಮ ಅಕ್ಷರಶಃ ನರಕವಾಗಿ ಮಾರ್ಪಾಡಾಗಿತ್ತು. ಕ್ರಿಶ್ಚಿಯನ್ ಮಿಷನರಿಗಳೂ ಮತಾಂತರ ಮಾಡಿಸಿ ಧರ್ಮ ಹಿಗ್ಗಿಸಲು ತುದಿಗಾಲಲ್ಲಿ ನಿಂತಿದ್ದರಲ್ಲಾ? ಅವರಿಗೆ ದಲಿತರ ತಲ್ಲಣಗಳೇ ಪ್ಲಸ್ ಪಾಯಿಂಟ್‌ಗಳಾಗಿವೆ. ಆ ಸಂದರ್ಭದಲ್ಲಿ ಹಣ ಹರಿದಾಡಿದ್ದು ಸತ್ಯವಿರಬಹುದು, ಮತಾಂತರ ಹೊಂದಿದವರಿಗೆ ಕ್ರಿಶ್ಚಿಯನ್ ಧರ್ಮದಲ್ಲಿ ಸೂಕ್ತ ಸ್ಥಾನಮಾನ ದೊರಕದಿರಬಹುದು, ಆದರೆ ಹಾಗೆ ಮತಾಂತರ ಹೊಂದಿದ ದಲಿತ ಬಂಧುಗಳಲ್ಲಿ ಬಿಡುಗಡೆಯ ಭಾವ ಆವರಿಸಿದ್ದು ಸುಳ್ಳಲ್ಲ.
ಹಿಂದೂ ಧರ್ಮ ಉಳಿಯಬೇಕು ಅಂತೊಂದು ಉನ್ಮಾದದ ಅಜೆಂಡಾ ಇಟ್ಟುಕೊಂಡು ಮಾತನಾಡುವ, ಬರೆಯುವ ಮಂದಿಗೆ ಎಷ್ಟೋ ಸತ್ಯಗಳ ಅರಿವಿರುವುದಿಲ್ಲ. ಅದೆಲ್ಲವನ್ನೂ ಅರಗಿಸಿಕೊಂಡಿರುವ ಎಸ್.ಎಲ್.ಭೈರಪ್ಪನವರಂತಹ ಹಿರಿಯರೂ ಸಹ ಸತ್ಯಗಳನ್ನು ಒಂದೇ ದಿಕ್ಕಿನಲ್ಲಿ ಹರಿಯ ಬಿಡುತ್ತಾರೆ. ಮತ್ತು ಅದೇ ಅಂತಿಮ ಸತ್ಯವೆಂದು ನಂಬಿಸ ಹೊರಡುತ್ತಾರೆ. ಭೈರಪ್ಪನವರು ತಮ್ಮ ಲೇಖನದಲ್ಲಿ ಯಾವ ಸಿದ್ಧಗಂಗಾ ಶ್ರೀಗಳನ್ನು ಹೊಗಳಿದ್ದಾರೋ ಅವರ ಸಮುದಾಯದ ಮಂದಿ ಈ ಹಿಂದೆ ದಲಿತರಾಗಿದ್ದವರು. ಮತಾಂತರ ಹೊಂದಿದ ಬಳಿಕ ತಮ್ಮ ಸಮುದಾಯಕ್ಕೆ ವೀರಶೈವ ಧರ್ಮ ಅಂತ ಹೆಸರಿಟ್ಟುಕೊಂಡವರು. ಬಸವಣ್ಣನೆಂಬ ಕ್ರಾಂತಿಕಾರಿಯ ನೇತೃತ್ವದಲ್ಲಿ ಮತಾಂತರ ಹೊಂದಿದ ಇಂದಿನ ಲಿಂಗಾಯತರದ್ದೂ ಇದೇ ಸ್ಥಿತಿ. ಈ ಎರಡು ಮತಾಂತರ ಪ್ರಕ್ರಿಯೆಗಳು ಯಾತಕ್ಕಾಗಿ ನಡೆದವು, ಯಾರಿಂದಾಗಿ ನಡೆದವು ಎಂಬ ಬಗ್ಗೆ, ತಮ್ಮ ಹಿಂದುತ್ವ ಪ್ರತಿಪಾದನೆಗಾಗಿ ವಿವಿಧ ಗ್ರಂಥಗಳನ್ನು ಅಭ್ಯಸಿಸಿದಂತೆಯೇ ಭೈರಪ್ಪನವರು ತಲಾಶ್ ನಡೆಸಿದರೆ ಇಂದು ನಡೆಯುತ್ತಿರುವ ಮತಾಂತರಕ್ಕೂ ತಕ್ಕ ಉತ್ತರ ಸಿಗುತ್ತದೆ.
ಮತಾಂತರ ಮಾಡಬೇಡಿ ಅಂತ ಹುಕುಂ ಹೊರಡಿಸುವುದೆಂದರೆ, ಇಲ್ಲಿನ ಹಿಂದೂಗಳಲ್ಲಿಯೆ ತುಳಿತಕ್ಕೊಳಗಾದವರಿಗೆ ಇಲ್ಲೇ ಇರಿ ಎಂದು ಆದೇಶಿಸಿದಂತೆಯೆ. ಹಾಗೊಂದು ಫರ್ಮಾನು ಹೊರಡಿಸುವ ಯೋಗ್ಯತೆ, ನೈತಿಕತೆ ನಮಗಿದೆಯಾ? ಇದು ಪ್ರಶ್ನೆ. ದಲಿತ ಸಮುದಾಯದವರು, ಹಿಂದುಳಿದ ವರ್ಗದವರು, ಮೇಲ್ಜಾತಿಯವರ ಮನೆಯ ಮುಂದಿನ ಕಿರುಜಗುಲಿಯಲ್ಲಿ ನಡ ಬಗ್ಗಿಸಿ ನಿಲ್ಲಬೇಕು, ಕುಡಿದ ಲೋಟ ತೊಳೆದಿಡಬೇಕು, ಉಂಡ ಎಲೆ ಎತ್ತಿ ಗೊಬ್ಬರದ ಗುಂಡಿಗೆಸೆದು ಊಟಕ್ಕೆ ಕುಳಿತ ಜಾಗವನ್ನು ಸಗಣಿ ಹಾಕಿ ಸಾರಿಸಬೇಕು, ಸಮಾರಂಭಗಳಲ್ಲಿ ಪ್ರತ್ಯೇಕವಾಗಿ ಉಂಡೇಳಬೇಕು... ಇಷ್ಟೆಲ್ಲಾ ಅವಮಾನಗಳನ್ನು ಸಹಿಸಿಕೊಂಡೂ ಇಲ್ಲೇ ಇರಬೇಕು! ಇದು ಭೈರಪ್ಪನವರ ಚಿಂತನೆಯ ಅಂತರಾಳ.
ಇಂದಿಗೂ ಎಷ್ಟೋ ಊರುಗಳಲ್ಲಿ ದಲಿತರಿಗೆ ದೇವಸ್ಥಾನಗಳ ಗರ್ಭಗುಡಿಗೆ ಪ್ರವೇಶವಿಲ್ಲ. ಉಡುಪಿಯ ಪೇಜಾವರ ಮಠದಲ್ಲಿ ನಾಗರಿಕ ಸಮುದಾಯವೇ ತಲೆ ತಗ್ಗಿಸುವಂತೆ ಪಂಕ್ತ್ತಿಭೇದ ಜಾರಿಯಲ್ಲಿದೆ. ದಲಿತ ಸಮುದಾಯದವರು ಹಲವಾರು ಬದಲಾವಣೆಗಳಿಗೆ ಒಗ್ಗಿಕೊಳ್ಳುತ್ತಾ ಬೌದ್ಧಿಕವಾಗಿ ಮೇಲ್ವರ್ಗದವರಿಗೆ ಸರಿಸಾಟಿಯಾಗಿ ಬೆಳೆಯುತ್ತಿದ್ದಾರೆ. ಆದರೆ ಸಮಾಜಿಕವಾಗಿ ಪುರಾತನ ಸ್ಥಾನಮಾನಗಳೇ ಗಟ್ಟಯಾಗಿವೆ. ‘ಪ್ರಜಾಪ್ರಭುತ್ವಾತ್ಮಕವಾಗಿ, ಕಾನೂನು ಸಮ್ಮತವಾದ ವಿಧಾನಗಳಿಂದ ಮತಾಂತರ ತಡೆಯಲಾಗದೆಂಬುದನ್ನು ಅರಿತ ದೇಶಭಕ್ತರು ಹಿಂಸಾಮಾರ್ಗ ತುಳಿದು ರಕ್ಷಣೆಗೋಸ್ಕರ ಭೂಗತ ಮಾರ್ಗ ತುಳಿದರೆ ಅದಕ್ಕೆ ನೈತಿಕ ಹೊಣೆ ಯಾರದು? ಎಂದು ವೀರಾವೇಶದಿಂದ ಗೋಳಾಡುವ ಭೈರಪ್ಪನವರು ‘ಹಿಂದೂ ಧರ್ಮದೊಳಗಿನ ತುಳಿತಕ್ಕೆ’ ಮೇಲು ಕೀಳೆಂಬ ಭಾವನೆಗೆ ಬಲಿಯಾಗಿ ದಲಿತರು ಬೇರೆ ಧರ್ಮಕ್ಕೆ ಹೊರಟುನಿಂತರೆ, ಸಮಯ ಸಾಧಕ ಕ್ರಿಶ್ಚಿಯನ್ ಮಿಷನರಿಗಳೆಲ್ಲ ಅದನ್ನೇ ಉಪಯೋಗಿಸಿಕೊಂಡರೆ ಅದಕ್ಕೆ ಯಾರು ಹೊಣೆ? ಈ ಪ್ರಶ್ನೆಗೆ ಆತ್ಮಸಾಕ್ಷಿಯ ಉತ್ತರ ಕೊಡಬೇಕಿದೆ.
ಮತಾಂತರದಂತಹ ಗಂಭೀರ ವಿಷಯದಲ್ಲಿ ಭೈರಪ್ಪನವರಂತೆ ಒಂದು ದೃಷ್ಟಿಕೋನದ ಪೂರ್ವಾಗ್ರಹ ಪೀಡಿತ ಸಂಶೋಧನೆ(?) ನಡೆಸಿದರೆ ಉರಿವ ಬೆಂಕಿ ಧಗಧಗಿಸುತ್ತದೆ. ಇತಿಹಾಸದ ಗಾಯಗಳಿಗೆ ತಿವಿದು ವ್ರಣಗೊಳಿಸುವ ಬದಲು ವಾಸ್ತವಕ್ಕೆ ಸ್ಪಂದಿಸಬೇಕಿರುವುದು ಸಧ್ಯದ ದರ್ದು. ಇದು ನಮ್ಮ ನೆಲದ ಸಮಸ್ಯೆ. ನಾವು ನಾವುಗಳೇ ಪರಿಹರಿಸಿಕೊಳ್ಳೋಣ. ಅದಕ್ಕೆ ಇತಿಹಾಸ, ವಿದೇಶಗಳ ಸಮರ್ಥನೆಗಳು ಬೇಕಿಲ್ಲ. ಭಜರಂಗಿಗಳೆಂಬ ಭಂಡರನ್ನು ದೇಶಭಕ್ತರನ್ನಾಗಿಸಿ ಸಮಾನತೆಗೋಸ್ಕರ ಕಾಡುಸೇರಿದವರನ್ನು ದೇಶದ್ರೋಹಿಗಳೆಂದು ಬಿಂಬಿಸುವುದನ್ನು ಲಂಪಟತನವೆನ್ನಬೇಕಾಗುತ್ತದೆ.
ತಮ್ಮ ವಿಚಾರಗಳಿಗೆ ಪೂರಕವಾದ ಕೆಲ ಗ್ರಂಥಗಳನ್ನು ಓದಿಕೊಂಡಿರುವ ಭೈರಪ್ಪನವರು ಅವುಗಳ ಬಲದಿಂದಲೇ ತಮ್ಮ ಕೊಳಕು ಚಿಂತನೆ ಹರಿಯಬಿಟ್ಟಿದ್ದಾರೆ. ಹಾಗೊಂದು ಘಟನೆ ವಿವರಿಸುತ್ತಾ ಅದಕ್ಕೆ ಗ್ರಂಥವೊಂದರ ಊರುಗೋಲು ಕುಟ್ಟುತ್ತಾ ಸಾಗುವ ಭೈರಪ್ಪನವರು ಅಲ್ಲಲ್ಲಿ ‘ನನ್ನ ಓದಿನ ಮಿತಿಯಲ್ಲಿ ಇದು ಸತ್ಯ’ ಎಂಬರ್ಥದಲ್ಲಿ ಬರೆಯುತ್ತಾರೆ. ಅವರ ಓದಿನ ಮಿತಿಯಾಚೆಗೂ ಕಟು ಸತ್ಯವೊಂದು ಉಳಿದುಕೊಂಡಿರಬಹುದಲ್ಲಾ? ಇದರ ಬಗ್ಗೆ ಅವರು ತಲೆಕೆಡಿಸಿಕೊಳ್ಳುವುದಿಲ್ಲ.
ಭೈರಪ್ಪನವರು ತಮ್ಮ ಕಾದಂಬರಿಗಳ ಮೂಲಕ ಇದೀಗ ವಿಶಾಲ ಓದುಗ ಬಳಗವನ್ನು ಸೃಷ್ಟಿಸಿಕೊಂಡಿರುವುದರಿಂದ, ಆ ವರ್ಗ ಭೈರಪ್ಪ ಬರೆದದ್ದಲ್ಲ ನಿಜವೆಂದು ಒಪ್ಪಿಕೊಳ್ಳುವ ಸಾಧ್ಯತೆ ಇರುವುದರಿಂದ ಈ ಕುರಿತು ಬರೆಯಬೇಕಾಯಿತು. ಕಾದಂಬರಿಕಾರನಾಗಿ ಭೈರಪ್ಪನವರನ್ನು ಒಪ್ಪಿಕೊಳ್ಳಬಹುದೇನೋ, ಆದರೆ ಒಬ್ಬ ಚಿಂತಕನಾಗಿ ಭೈರಪ್ಪನವರು ಖಂಡಿತಾ ಮನಸ್ಸಿಗಿಳಿಯಲಾರರು. ಅವರ ಲೇಖನ ಓದಿದ ಯಾರಿಗಾದರೂ ಹಾಗನ್ನಿಸುತ್ತದೆ.
ಭೈರಪ್ಪನವರ ಲೇಖನಿಯಿಂದ ಇನ್ನಾದರೂ ಇಂಥ ಕೊಳಕು ಶಾಹಿ ಹರಿಯದಿರಲಿ!